ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
ಡಿಡಿಯು - ಜಿಕೆವೈ ಹಿನ್ನೆಲೆ ಮತ್ತು ಪರಿಚಯ

ಡಿಡಿಯು-ಜಿಕೆವೈ ಯೋಜನೆಯ ಹಿನ್ನೆಲೆ ಮತ್ತು ಪರಿಚಯ:

 

ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ - ಡಿಡಿಯು-ಜಿಕೆವೈ (ಈ ಹಿಂದೆ ಆಜೀವಿಕ ಸ್ಕಿಲ್ಸ್‌ ಯೋಜನೆ ಹೆಸರಿನಿಂದ ಕರೆಯಲ್ಪಡುತಿತ್ತು) ಈ ಯೋಜನೆಯು ಗ್ರಾಮೀಣ ಬಡ ಯುವ ಜನರನ್ನು ಕೌಶಲ್ಯಾಧಾರಿತ ಉದ್ಯೋಗಿಗಳನ್ನಾಗಿ ಪರಿವರ್ತಿಸಿ ಆರ್ಥಿಕವಾಗಿ ಸ್ವತಂತ್ರರನ್ನಾಗಿಸುವ ಮತ್ತು ಜಾಗತಿಕವಾಗಿ ಸಂಬಂಧಿತ ಉದ್ಯಮಗಳಿಗೆ ಅವಶ್ಯ ಕೌಶಲ್ಯಾಧಾರಿತ ಉದ್ಯೋಗಿಗಳನ್ನಾಗಿ ಪರಿವರ್ತಿಸುವ ದೂರದೃಷ್ಟಿಯನ್ನು ಹೊಂದಿ ಅನುಷ್ಠಾನಗೊಳ್ಳುತ್ತಿದೆ.

 

ಡಿಡಿಯು-ಜಿಕೆವೈ ತನ್ನ ಗುರಿಯನ್ನು ಉದ್ಯಮಗಳ ಅಗತ್ಯತೆಯ ಆಧಾರದ ಮೇಲೆ ಸಾಧಿಸಲು ಅವಶ್ಯ ಕಾರ್ಯತಂತ್ರಗಳನ್ನು ರೂಪಿಸಿದೆ. ಅಂದರೆ ಉದ್ಯಮಗಳ ಅಗತ್ಯತೆಯ ಆಧಾರದ ಮೇಲೆ ಮತ್ತು ಗ್ರಾಮೀಣ ಯುವ ಜನರ ಆಸಕ್ತಿ,  ಅರ್ಹತೆಯ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ಉದ್ಯೋಗಿಗಳನ್ನಾಗಿ ನೇಮಿಸುವುದರ ಮೂಲಕ ಅವರುಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಮತ್ತು ಉತ್ಪಾದಕ ಕಾರ್ಯಪಡೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಗ್ನವಾಗಿದೆ.

 

ಡಿಡಿಯು-ಜಿಕೆವೈ ಕಾರ್ಯಕ್ರಮವು ತನ್ನ ವಿಧಾನ ಹಾಗೂ ಕಾರ್ಯತಂತ್ರಗಳಿಂದಾಗಿ ವಿಶೇಷವಾದ ಕೌಶಲ್ಯಾಭಿವೃದ್ಧಿ ಯೋಜನೆಯಾಗಿದೆ. ಇದು ರಾಷ್ಟ್ರದಲ್ಲೇ ಗ್ರಾಮೀಣ ಯುವ ಜನರನ್ನು ಕೇಂದ್ರೀಕರಿಸಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿರುವ ಯೋಜನೆಯಾಗಿದೆ. ಅದರಲ್ಲೂ ಮುಖ್ಯವಾಗಿ ಎನ್‌ಆರ್‌ಎಲ್‌ಎಂ ಯೋಜನೆಯ ಸ್ವಸಹಾಯ ಗುಂಪುಗಳು ರಚನೆಗೊಂಡಿರುವ ಪ್ರದೇಶಗಳು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳು ಹಾಗೂ ಸೌಲಭ್ಯಗಳಿಂದ ವಂಚಿತವಾಗಿರುವ ಸಮುದಾಯಗಳು ಮುಖ್ಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪ ಸಂಖ್ಯಾತರು, ವಿಶೇಷ ಚೇತನರು ಮಾನವ ಸಾಗಾಣಿಕೆಗೆ ಒಳಪಟ್ಟವರು, ವಿಶೇಷ ದುರ್ಬಲ ಬುಡಕಟ್ಟು ಕುಟುಂಬಗಳು ಮತ್ತಿತರ ಹಿಂದುಳಿದ ಸಮುದಾಯಗಳಿಗೆ ವಿಶೇಷ ಆದ್ಯತೆಯ ಆಧಾರದ ಮೇಲೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

 

ಡಿಡಿಯು-ಜಿಕೆವೈ ಕಾರ್ಯಕ್ರಮದ ಗುಣಮಟ್ಟವನ್ನು ಸಾಧಿಸಲು ತನ್ನದೇ ಆದ ಚೌಕಟ್ಟು, ಮಾರ್ಗಸೂಚಿಗಳು, ಪ್ರಮಾಣಿತ ಕಾರ್ಯಚರಣೆಯ ವಿಧಾನಗಳು (ಸ್ಟ್ಯಾಂಡರ‍್ಡ್‌ ಆಪರೇಷನಲ್‌ ಫ್ರೋಸಿರ‍್ಸ್‌) ಹೊಂದಿದ್ದು, ತರಬೇತಿ ನೀಡುವ ಯೋಜನಾ ಅನುಷ್ಠಾನ ಸಂಸ್ಥೆಗಳ ಮತ್ತು ಕೇಂದ್ರಗಳ ಕುರಿತು ವಿಸ್ತೃತ ವಿವರಣೆಯನ್ನು ಒಳಗೊಂಡಿದೆ. ಇದನ್ನು ಈ ಕಾರ್ಯಕ್ರಮದ ವಿಶೇಷತೆ ಎಂದು ಪರಿಗಣಿಸಬಹುದು. ಇದರ ನಿಯಮಾವಳಿಗಳಿಂದ ಜಾಗತಿಕ ಮಟ್ಟಕ್ಕೆ ಕೌಶಲ್ಯ ತರಬೇತಿಯನ್ನು ಗ್ರಾಮೀಣ ಯುವ ಜನರಿಗೆ ಕಲ್ಪಿಸಲು ಸಾಧ್ಯವಾಗುತ್ತಿದೆ. ತರಬೇತಿ ಹಂತದಲ್ಲಿ ಅಭ್ಯರ್ಥಿಗಳು ತಾವು ಆಯ್ಕೆ ಮಾಡುವ ಕೌಶಲ್ಯ ತರಬೇತಿಯ ವಿಷಯ ವಸ್ತುಗಳನ್ನು ಒಳಗೊಂಡಂತೆ ಇಂಗ್ಲೀಷ್‌ ಭಾಷೆ, ಜೀವನದ ಕೌಶಲ್ಯಗಳು ಮತ್ತು ಮಾಹಿತಿ ತಂತ್ರಜ್ಞಾನದ ತರಬೇತಿಯನ್ನು ನೀಡಲಾಗುವುದು. ಇದರಿಂದ ತರಬೇತಿ ಪಡೆದ ಅಭ್ಯರ್ಥಿಗಳು, ತರಬೇತಿಯ ನಂತರದಲ್ಲಿ ತಮ್ಮದೇ ಆದ ಕ್ಷೇತ್ರದಲ್ಲಿ ಉದ್ಯೋಗ ಪಡೆದು, ವೃತ್ತಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತಿದೆ.    

 

ಡಿಡಿಯು - ಜಿಕೆವೈ ಯೋಜನೆಯು ಮೂರು ಹಂತದ ರಚನೆಯನ್ನು ಹೊಂದಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅಗತ್ಯ ಚೌಕಟ್ಟು, ಮಾರ್ಗಸೂಚಿಗಳು, ನೀತಿ – ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಅಭಿಯಾನ ನಿರ್ವಹಣಾ ಘಟಕಗಳಿಗೆ ಅಗತ್ಯ ಬೆಂಬಲ ಹಾಗೂ ಸಹಕಾರವನ್ನು ಓದಗಿಸುತ್ತದೆ.  

 

ರಾಜ್ಯ ಅಭಿಯಾನ ನಿರ್ವಹಣಾ ಘಟಕವು (ಸಂಜೀವಿನಿ – ಕೆಎಸ್‌ಆರ್‌ಎಲ್‌ಪಿಎಸ್‌) ರಾಜ್ಯದಲ್ಲಿ ಕಾರ್ಯಕ್ರಮ ಅನುಷ್ಠಾನ ಸಂಸ್ಥೆಯಾಗಿದ್ದು, ಮಾರ್ಗಸೂಚಿ ಅನ್ವಯ ವಿವಿಧ ಯೋಜನಾ ಅನುಷ್ಠಾನ ಸಂಸ್ಥೆಗಳನ್ನು ಗುರುತಿಸಿ ಯಶಸ್ವಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ.

 

ಯೋಜನಾ ಅನುಷ್ಠಾನ ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ ಎನ್‌ಆರ್‌ಎಲ್‌ಎಂ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಅವರುಗಳ ಕುಟುಂಬಗಳ ಸದಸ್ಯರುಗಳಲ್ಲಿ 18 ರಿಂದ 35 ರ‍ ವಯೋಮಾನದ ಯುವ ಜನರನ್ನು ಗುರುತಿಸಿ, ಸಮಾಲೋಚನೆ ನಡೆಸಿ, ಕೌಶಲ್ಯ ತರಬೇತಿ ನೀಡಿ, ನಂತರ ವಿವಿಧ ಉದ್ಯಮಗಳಲ್ಲಿ ವೇತನಾಧಾರಿತ ಉದ್ಯೋಗವನ್ನು ಪಡೆದು ಸುಸ್ಥಿರ ಜೀವನೋಪಾಯ ಹೊಂದಲು ಅಗತ್ಯ ನಿರ್ವಹಿಸುತ್ತಿವೆ. ಡಿಡಿಯು-ಜಿಕೆವೈ ಯೋಜನೆಯು ಕನಿಷ್ಠ ಮೂರರಿಂದ ಗರಿಷ್ಠ 12 ತಿಂಗಳ ಅವಧಿಯ ತರಬೇತಿಯನ್ನು ಹೊಂದಿದೆ. ಹೀಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಕೂಡಲೇ ಉದ್ಯೋಗಗಳನ್ನು ಓದಗಿಸಲಾಗುವುದು.